ನಂಬಿಕೆಯ ನೆತ್ತಿಗೆ ಗೀರಿದ ಮೋಸ ಅವಮಾನದ ಗಾಯ ಹಾಗೇ ನಗುತಿರಲಿ!

ನೀವ್ಯಾರನ್ನೋ ತುಂಬಾ ನಂಬಿರುತ್ತೀರಿ. ಎಷ್ಟೆಂದರೆ ಉಸಿರಿನಷ್ಟು. ಇಡೀ ಜಗತ್ತೇ ಬೆನ್ನಿಗಿರಿದರೂ ಅವರ ಕಡೆಯಿಂದ ಸಣ್ಣದೊಂದು ದೋಖಾ ಕೂಡಾ ನಡೆಯಲು ಸಾಧ್ಯವಿಲ್ಲ ಅಂತಲೇ ನಂಬಿ ಕೂತಿರುತ್ತೀರಿ. ಆ ನಂಬಿಕೆ ಸುಳ್ಳು ಅಂತೊಂದು ಸುಳಿವು ಸಿಕ್ಕಿದರೆ ಜೀವವೇ ಬಸಿದು ಹೋದಂತೆ ಕಂಗಾಲಾಗಿ ಬಿಡುತ್ತೀರಿ. ನಂಬಿಕೆಯ ನೆತ್ತಿಯಲ್ಲಿ ಮೋಸದ ಮೊನೆ ಗೀರಿದ ಗಾಯ. ನಂಬಿದವರ ಎದೆಯಲ್ಲೇ ನಸುನಗತ್ತಿರೋ ಮೋಸದ ಕೋರೆಹಲ್ಲು!

ಹೇ ಈ ಜಗತ್ತಲ್ಲಿ ನಂಬಿಕೆಗೆ ಬೆಲೆ ಇಲ್ಲ ಬಿಡ್ರೀ ಅಂತೊಂದು ಫಿಲಾಸಫಿ ಹೋದಲ್ಲಿ ಬಂದಲ್ಲಿ ಕಿವಿ ಸೋಕುತ್ತಲೇ ಇರುತ್ತದಲ್ಲಾ? ಅದು ಇಂತಾ ನಯವಂಚನೆಯ ಕೋರೆಹಲ್ಲುಗಳ ಇರಿತದ ಪ್ರಭಾವವೇ. ಜಗತ್ತಿನಲ್ಲಿ ನಂಬಿಕೆ ಅನ್ನೋದು ಯಾವಾಗ ಹುಟ್ಟಿಕೊಂಡಿತೋ ಅದರ ಬೆನ್ನಿಗೇ ಮೋಸ, ವಂಚನೆಗಳೂ ಹುಟ್ಟಿಕೊಂಡಿವೆ. ನಮಗಂಥಾ ಮೋಸವಾಗೋದಿಲ್ಲ ಅನ್ನೋದು ನಂಬಿಕೆ. ನಮಗೆಂದೇ ವಂಚನೆಯ ಕೋರೆಹಲ್ಲೊಂದು ಕಾದುಕೂತಿದೆ ಎಂಬುದು ವಾಸ್ತವ ಮತ್ತು ಎಚ್ಚರ!

ನಿಜ, ಇಂಥಾ ಮೋಸ ವಂಚನೆಗಳು ಗಾಯಗೊಳಿಸಿ ಸುಮ್ಮನಾಗೋದಿಲ್ಲ. ಅವಮಾನಗಳ ಪ್ರಹಾರ ನಡೆಸಿ ಘಾಸಿಗೊಳಿಸಿ ಬಿಡುತ್ತವೆ. ಆ ಕ್ಷಣದಲ್ಲಿ ನನಗೇ ಹೀಗಾಯ್ತಲ್ಲ ಅಂತ ಕೊರಗುತ್ತಾ ಕೂತರೆ ಮತ್ತೊಂದಷ್ಟು ಬೂಟುಗಾಲುಗಳು ಎದೆಯಲ್ಲಿ ಚಹರೆ ಮೂಡಿಸಲು ತಯಾರಾಗಿ ಬಿಡುತ್ತವೆ. ಇಂಥಾ ಸ್ವಮರುಕ ಘಾಸಿಗೊಂಡ ಮನಸನ್ನು ಮತ್ತೆ ಮತ್ತೆ ಕೊಲ್ಲುತ್ತೆ. ಮನಸಂತೂ ಆ ನೋವನ್ನೇ ಮತ್ತೆ ಮತ್ತೆ ಮೆಲ್ಲುತ್ತೆ. ಆದರೆ ಒಂದು ಸಲ ಆ ಕೂಪದಿಂದ ಎದ್ದು ನಿಂತು ನೋಡಿ; ಮುಗಿದೇ ಹೋಯ್ತೆಂಬಂಥಾ ದಾರಿಯ ಕೊನೆಯಲ್ಲೊಂದು ಮಿಣುಕು ದೀಪ ಖಂಡಿತಾ ಗೋಚರಿಸುತ್ತೆ.

ಆದರೆ ಆದ ಗಾಯಗಳನ್ನು ಯಾವತ್ತಿಗೂ ಸಂಪೂರ್ಣವಾಗಿ ವಾಸಿಯಾಗಲು ಆಸ್ಪದ ಕೊಡಬೇಡಿ. ಅವಮಾನದ ಪ್ರಹಾರ ಎದೆಯಲ್ಲಿಯೇ ಹಸಿರಾಗಿರಲಿ. ಮೋಸದ ಮೊನೆ ಗೀರಿದ ಗಾಯ ಹಾಗೆಯೇ ನಗುತ್ತಿರಲಿ. ಜಗತ್ತು ನಿಮ್ಮನ್ನು ಬಡಿದು ಕೆಡವಲು ನಿಂತಾಗಲೇ ಆ ಗಾಯಗಳೇ ಎದ್ದು ನಿಲ್ಲುವ ಕಸುವು ತುಂಬುತ್ತವೆ. ಹಾಗೆಯೇ ನಿಮ್ಮ ಗುರಿಯತ್ತ ತ್ರಾಸವಾದರೂ ಹೆಜ್ಜೆಯಿಡಿ. ಅಂದುಕೊಂಡಿದ್ದನ್ನು ಅದೇನೇ ಬಂದರೂ ಸಾಧಿಸಿ. ನೀವಿಚ್ಚಿಸಿದ ಗೆಲುವೊಂದು ನಿಮ್ಮದಾಗುತ್ತದಲ್ಲಾ? ಆಗ ಇಂಥಾ ಗಾಯಗಳನ್ನು ನೇವರಿಸಿಕೊಳ್ಳಲೂ ಪುರಸೊತ್ತು ಸಿಗದಂತೆ ಬ್ಯುಸಿಯಾಗಿ ಬಿಡಿ!

LEAVE A REPLY

Please enter your comment!
Please enter your name here